ದಾರುಹಂಬುಗಳು
ಅತಿ ದಪ್ಪವಾದ ಕಾಷ್ಠಮಯ ಮತ್ತು ದೀರ್ಘ ಕಾಲ ಬಾಳುವ ಬಳ್ಳಿಗಳು (ಲಯಾನಾಸ್). ಇವನ್ನು ವಿಶೇಷವಾಗಿ ದಟ್ಟ ಅರಣ್ಯಗಳಲ್ಲಿ ಕಾಣಬಹುದು. ಇವು ಎತ್ತರದ ಮರಗಳಿಗೆ ಸುತ್ತಿಕೊಂಡು ಬೆಳೆದು ಕಡೆಗೆ ಗಾಳಿ, ಬೆಳಕಿಗಾಗಿ ಮರಗಳ ಮೇಲ್ಭಾಗಕ್ಕೆ ಹಬ್ಬುತ್ತವೆ. ಅಲ್ಲಿ ಲಭ್ಯವಿರುವ ಗಾಳಿ ಬೆಳಕನ್ನು ಬಳಸಿಕೊಂಡು ಅಸಂಖ್ಯ ಎಲೆಗಳನ್ನು ಉತ್ಪಾದಿಸುತ್ತವೆ. ಕೆಲವು ಸಾಮಾನ್ಯ ಉದಾಹರಣೆಗಳು; ಮಾಧವೀಲತೆ ಅಥವಾ ಅದರಗಂಚಿಹಂಬು, ಬಸವನಪಾದ ಬಳ್ಳಿ, ಇತ್ಯಾದಿ.

ಈ ಸಸ್ಯಗಳು ಉಷ್ಣವಲಯದ ಅಧಿಕ ಮಳೆ ಬೀಳುವ ಅರಣ್ಯಪ್ರದೇಶಗಳಲ್ಲಿ ಬೆಳೆಯುವುದೇ ಹೆಚ್ಚು. ಅಲ್ಲಿ ಮರ, ಕಂಟಿಗಳು ದಪ್ಪವಾಗಿಯೂ ವಿವಿಧ ಮಟ್ಟದ ಎತ್ತರದವುಗಳಾಗಿಯೂ ಬೆಳೆಯುವುದರಿಂದ ಬೆಳಕಿನ ಅಭಾವ ತೀವ್ರವಾಗಿರುತ್ತದೆ. ದಾರುಹಂಬುಗಳ ಬೇರುಗಳು ನೆಲದಲ್ಲಿದ್ದರೂ, ಇತರ ಮರಗಳ ಆಶ್ರಯದಿಂದ ಅವುಗಳ ಮೇಲೆ ಸುತ್ತಿಕೊಂಡು ಮರದ ಮೇಲ್ಭಾಗಕ್ಕೆ ಹಬ್ಬಿ ಎಲೆಗಳನ್ನು ಉತ್ಪಾದಿಸುತ್ತವೆ. ಈ ಬಳ್ಳಿಗಳ ಕಾಷ್ಠಮಯ ಕಾಂಡಗಳು ಚಪ್ಪಟೆಯಾಗಿದ್ದು, ಆಶ್ರಯ ವೃಕ್ಷಗಳಿಗೆ ನಿಕಟವಾಗಿ ಸುತ್ತಿಕೊಂಡಿದ್ದರೂ ಇವು ಆಶ್ರಯ ಮರಗಳಿಂದ ಯಾವ ರೀತಿಯ ಆಹಾರಗಳನ್ನೂ ಪಡೆಯವು; ಅಂದರೆ ಇವು ಪರಾವಲಂಬಿಗಳಲ್ಲ. ಇವುಗಳ ಕಾಂಡ ಉದ್ದವಾದ ದಪ್ಪವಾದ ಹೆಗ್ಗದಂತಿದ್ದು ಅಕ್ರಮ ಅಥವಾ ಅಸಂಗತ ಬೆಳೆವಣಿಗೆಯನ್ನು ಪ್ರದರ್ಶಿಸುತ್ತದೆ.

ಅಧಿಕ ಮಳೆ ಬೀಳುವ ಅರಣ್ಯ ಪ್ರದೇಶಗಳಲ್ಲಿ ಬೆಳೆಯುವ ಅಪ್ಪುಗಿಡಗಳು (ಎಪಿಫೈಟುಗಳು) ದಾರುಹಂಬುಗಳಿಗಿಂತ ಭಿನ್ನವಾಗಿರುತ್ತದೆ. ಅಪ್ಪುಗಿಡಗಳಿಗೆ ಭೂಮಿಯ ಸಂಪರ್ಕವಿರುವುದಿಲ್ಲ. ಆದರೆ ದಾರುಹಂಬುಗಳ ಬೇರುಗಳು ನೆಲದಲ್ಲಿರುತ್ತದೆ. ದಾರುಹಂಬುಗಳನ್ನು ಮಿಥ್ಯಾ ಅಪ್ಪುಗಿಡಗಳು ಎಂದು ಕರೆಯುವುದೂ ಉಂಟು.

	ದಾರುಹಂಬುಗಳ ಎಲೆಗಳು ಯವಾಗಲೂ ಹಸಿರಾಗಿಯೇ ಇರುವುವು. ಕೆಲವು ಏರುಕಂಟಿಗಳ ರೂಪದಲ್ಲಿದ್ದು, ಎಲೆಗಳನ್ನು ವರ್ಷಕ್ಕೊಮ್ಮೆ ಕಳೆದುಕೊಳ್ಳುವುದೂ ಉಂಟು. ಇನ್ನು ಕೆಲವು ಮೂಲಿಕೆಯಂತೆ ಮೃದು ಕಾಂಡಗಳನ್ನು ಪಡೆದಿದ್ದು ಒಂದು ಋತುಮಾನದವರೆಗೆ ಮಾತ್ರ ಜೀವಿಸಿರುತ್ತವೆ. ಮತ್ತೆ ಕೆಲವು ಬಗೆಗಳ ಕಾಂಡ ಗುಪ್ತಕಾಂಡದ ರೂಪದಲ್ಲಿ ಭೂಮಿಯೊಳಗೆ ದೀರ್ಘಕಾಲ ಇರುತ್ತದೆ. ಇನ್ನು ಕೆಲವು ದಾರುಹಂಬುಗಳು ಬಂಡೆಗಳ ಮೇಲೆ ಹಬ್ಬಿ ಬೆಳೆಯುವುದು ಉಂಟು. ಈ ಹಂಬುಗಳು ಬೆಳೆಯುವ ಕ್ರಮದ ಆಧಾರದ ಮೇಲೆ ಇವನ್ನು ಬೇರು, ಬಳ್ಳಿಗಳು, ಸುತ್ತು ಬಳ್ಳಿಗಳು ನುಲಿಕೆ ಬಳ್ಳಿಗಳು ಮತ್ತು ಪಸರಿಸಿ ಬೆಳೆಯುವ ಬಳ್ಳಿಗಳು ಇತ್ಯಾದಿಯಾಗಿ ವರ್ಗೀಕರಿಸುವುದುಂಟು. ಇವುಗಳ ಪೈಕಿ ಹರಡಿ ಬೆಳೆಯುವ ಬಳ್ಳಿಗಳು ಪದರಿನಂತಿದ್ದು ಇತರ ಕಂಟಿ ಪೊದರಿನಿಂದ ಭಿನ್ನವಾಗಿರುತ್ತದೆ. ಇವುಗಳಲ್ಲಿ ಅತಿ ಉದ್ದ ಪಸರಿಸಿ ಬೆಳೆಯುವ ಕಾಂಡ ಶಾಖೆಗಳುಂಟು. ಇವು ಇತರ ಆಶ್ರಯ ಮರಗಳ ಶಾಖೆಗಳ ಮೇಲೆ ಯಾವುದೇ ರೀತಿ ಅಂಟಿಕೊಂಡಿರದೆ, ಪ್ರತ್ಯೇಕವಾಗಿಯೇ ಬೆಳೆಯುತ್ತಿರುತ್ತವೆ.

ಮತ್ತೆ ಕೆಲವು ಹಂಬು ಅಥವಾ ಏರು ಕಾಂಡಗಳು ಭೂಮಿಯಲ್ಲಿ ಬೀಜದಿಂದ ಮೊಳೆತರೂ ಅವುಗಳ ಕಾಂಡ ಕ್ರಮೇಣ ಕೆಳಗಿನಿಂದ ಮೇಲಿನ ವರೆಗೆ ನಶಿಸುತ್ತ ಹೋಗಿ ಕೊನೆಗೆ ಆಶ್ರಯ ಮರಗಳ ತುದಿಯಲ್ಲಷ್ಟೇ ಎಲೆ, ಹೂಗಳನ್ನು ಬಿಡುತ್ತವೆ. ಇಂಥವನ್ನು ಅರೆ ಅಪ್ಪುಗಿಡಗಳು ಅಥವಾ ಮಿಧ್ಯಾ ಅಪ್ಪುಗಿಡಗಳು ಎಂದು ಹೆಸರಿಸುವುದುಂಟು.
(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ